ಪೀಪ್ಸ್, ಸ್ಯಾಮ್ಯುಅಲ್
1633-1703. ಇಂಗ್ಲೆಂಡಿನ ಬರಹಗಾರ. ಜಾನ್ ಈವ್‍ಲಿನನಂತೆ (1620-1706) ತನ್ನ ದಿನಚರಿಯಿಂದ ಸಾಹಿತ್ಯ ಜಗತ್ತಿನಲ್ಲಿ ಖ್ಯಾತನಾದವ. ಲಂಡನ್ನಿನ ದರ್ಜಿಯೊಬ್ಬನ ಮಗನಾದರೂ ಸರ್ಕಾರದಲ್ಲಿ ಹಲವು ಸ್ಥಾನಗಳಲ್ಲಿದ್ದ. ನೌಕಾದಳ ಶಾಖೆಯೊಂದರ ಕಾರ್ಯದರ್ಶಿಯಾಗಿದ್ದ. ಪೋಪರಿಗೆ ಸಂಬಂಧಿಸಿದ ಪಿತೂರಿಯಲ್ಲಿ ಪಾಲ್ಗೊಂಡನೆಂಬ ಕಾರಣದಿಂದಾಗಿ ಅಧಿಕಾರವನ್ನು ಕಳೆದುಕೊಂಡು ಸೆರೆಮನೆ ಸೇರಿದ. ಮತ್ತೆ ತನ್ನ ಹಿಂದಿನ ಸ್ಥಾನವನ್ನು ಗಳಿಸಿಕೊಂಡ. (1686). ಎರಡು ವರ್ಷಗಳ ಅನಂತರ ವಜಾ ಮಾಡಲ್ಪಟ್ಟ.

ಪೀಪ್ಸ್‍ನ ದಿನಚರಿ ಒಂದು ಗುಪ್ತ ಶೀಘ್ರಲಿಪಿಯಲ್ಲಿತ್ತಾದ ಕಾರಣ ಅದನ್ನು 1825ರವರೆಗೆ ಯಾರಿಗೂ ಓದಲು ಸಾಧ್ಯವಾಗಿರಲಿಲ್ಲ. ಜಾನ್ ಸ್ಮಿತ್ ಎಂಬಾತ ಕಷ್ಟಪಟ್ಟು ಆ ವರ್ಷ ಅದನ್ನು ಆರ್ಥೈಸಿದ. ಲಾರ್ಡ್ ಬ್ರೇಬ್ರೂಕ್ ಎಂಬಾತ ದಿನಚರಿಯನ್ನು ಸಂಪಾದಿಸಿ ಸಂಗ್ರಹವೊಂದನ್ನು ಹೊರತಂದ. ಅನಂತರ ಪೂರ್ಣಪಾಠ ಪ್ರಕಟವಾಯಿತು. ಪೀಪ್ಸ್‍ನ ದಿನಚರಿ ತುಂಬಾ ಕುತೂಹಲಕಾರಿಯಾದ ಕೃತಿ. ಆತ ಇದನ್ನು ತನಗಾಗಿ ತನ್ನ ಸ್ವಂತಕ್ಕಾಗಿ ರಚಿಸಿಕೊಂಡಂತೆ ತೋರುತ್ತದೆ. ದಿನದ ಘಟನೆಗಳನ್ನೂ ತನ್ನ ಸುತ್ತಮುತ್ತಲಿನ ಜೀವನವನ್ನೂ ತನ್ನ ಪ್ರತಿಕ್ರಿಯೆಯನ್ನೂ ತೆರೆದ ಮನಸ್ಸಿನಿಂದ ಇಲ್ಲಿ ನಿರೂಪಿಸುತ್ತಾನೆ. ದಿನಚರಿ 1666 ರ ಜನವರಿ 1 ರಂದು ಪ್ರಾರಂಭವಾಗಿ 1669 ನೆಯ ಮೇ 31 ಕ್ಕೆ ಮುಕ್ತಾಯವಾಗುತ್ತದೆ. ದೃಷ್ಟಿಮಾಂದ್ಯದಿಂದಾಗಿ ಪೀಪ್ಸ್ ಇದನ್ನು ಮುಂದುವರಿಸಲಿಲ್ಲ. ಆ ಕಾಲದ ಆಸ್ಥಾನದ ಮತ್ತು ಶ್ರೀಮಂತವರ್ಗದ ರೀತಿನೀತಿಗಳು ಮತ್ತು ದೈನಂದಿನ ಜೀವನ-ಇವುಗಳ ಅಭ್ಯಾಸಕ್ಕೆ ಅಮೂಲ್ಯವಾದ ಕೃತಿ ಈ ದಿನಚರಿ. ಕೃತಿಕಾರ ತನ್ನ ವ್ಯಕ್ತಿತ್ವದ ಎಲ್ಲ ಮುಖಗಳನ್ನೂ ಯಥಾವತ್ತಾಗಿ ಪ್ರಾಮಾಣಿಕವಾಗಿ ಚಿತ್ರಿಸಿಕೊಂಡಿರುವ ರೀತಿ ಕೃತಿಯನ್ನು ಬಹು ಸ್ವಾರಸ್ಯಕರವನ್ನಾಗಿ ಮಾಡುತ್ತದೆ. ಆತ್ಮಪ್ರಶಂಸೆ ಮತ್ತು ಆತ್ಮವಂಚನೆಗಳಿಲ್ಲದೆ ಹಾಸ್ಯ ಬೆರೆತ ಆತ್ಮಚಿತ್ರಣದಿಂದ ನಮಗಿಲ್ಲಿ ಆಸಕ್ತಿಯನ್ನುಂಟು ಮಾಡುವ, ಎಲ್ಲವನ್ನೂ ತೆರೆದ ಕಣ್ಣಿನಿಂದ ಕಾಣಬಲ್ಲ ಗುಣದೋಷ ವಿಮರ್ಶೆಗೆ ಆತುರಪಡುವ ವ್ಯಕ್ತಿತ್ವದ ಪರಿಚಯವಾಗುತ್ತದೆ. ಇಂಥ ಆತ್ಮಚಿತ್ರಣ ಬೇರೆಲ್ಲಿಯೂ ಕಾಣುವುದಿಲ್ಲವೆಂದೆ ವಿಮರ್ಶಕರು ದಿನಚರಿಗಳ ಬರಹಗಾರರು ಬಹುಮಂದಿ. ಆದರೆ ಪೀಪ್ಸ್ ಒಬ್ಬನೇ ಎನ್ನುತ್ತಾರೆ. ಶೈಲಿ ಸರಳ, ಸಹಜ ; ಸಂಭಾಷಣೆ ಸ್ವಾರಸ್ಯಕರ. 

ಮೆಮ್ವಾರ್ಸ್ ಆಫ್ ದಿ ರಾಯಲ್ ನೇವಿ ಎನ್ನುವ ಕೃತಿಯೂ ಈತನದೆ.

ಪೀಪ್ಸ್‍ಗೆ ವಿಚಿತ್ರವಾದ ಅನೇಕ ಆಸಕ್ತಿಗಳಿದ್ದವು. ತಾನು ಸಂಗ್ರಹಿಸಿದ ಪುಸ್ತಕಗಳು, ಹಸ್ತ ಪ್ರತಿಗಳು, ಚಿತ್ರಗಳು ಮುಂತಾದವನ್ನು ಈತ ತಾನು ಓದಿದ ಕೇಂಬ್ರಿಜ್‍ನ ಮ್ಯಾಗ್ಡಲೀನ್ ಕಾಲೇಜಿಗೆ ದಾನ ಮಾಡಿದ್ದಾನೆ.			(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ